ನಾಯಕಸ್ವಾಮಿ
	ಉತ್ತರ ಕನ್ನಡ ಜಿಲ್ಲೆಯಲ್ಲಿದ್ದ ಒಬ್ಬ ಸಂತಕವಿ. ಪೂರ್ಣ ಹೆಸರು ಶಂಕರ ಮಂಗೇಶ ನಾಯಕ ಕರಂಡೇದೇಸಾಯಿ. ಹುಟ್ಟಿದ್ದು ಕುಮಟಾ ತಾಲೂಕಿನಲ್ಲಿಯ ಅಂತರವಳ್ಳಿ ಗ್ರಾಮದಲ್ಲಿ.  ಸಾರಸ್ವತ ಬ್ರಾಹ್ಮಣ.  ಒಮ್ಮೆ ತಮ್ಮ ಕುಲದೇವತೆಯಾದ ಗೋವೆಯ ಪ್ರದೇಶದಲ್ಲಿನ ಶ್ರೀಕ್ಷೇತ್ರ ಮಂಗೇಶಕ್ಕೆ ಹೋದಾಗ ಅಕಸ್ಮಾತ್ ಕುಟುಂಬದವರೆಲ್ಲ ರಸ್ತೆಯ ಕಾಡಿನಲ್ಲಿ ಬೇರೆಬೇರೆಯಾಗಿ ದಾರಿ ತಪ್ಪಿಸಿಕೊಂಡರಾಗಿ ಹಿಂದಕ್ಕೆ ಹೋಗದೆ ಮಂಗೇಶದಲ್ಲಿಯೇ ನೆಲೆಯೂರಿ ನಿಂತ. ಅಲ್ಲಿರುವಾಗ ಸಂನ್ಯಾಸಿಯೊಬ್ಬನಿಂದ ವೈರಾಗ್ಯವನ್ನು ಪಡೆದು ಕಳೆದು ಹೋದ ತಂದೆತಾಯಿಗಳ ಭೇಟಿಯಾಗಲಾಗಿ ಅವರೊಂದಿಗೆ ಮಂಗೇಶದಲ್ಲಿಯೇ ನಿಂತುಬಿಟ್ಟ.

	ಮಂಗೇಶವೇ ಕಾಶಿ ಎಂದು ಅರಿತ ಈತ ಅಲ್ಲಿಯೇ ನಿಂತು ಧಾರ್ಮಿಕ ಜೀವನ ನಡೆಸಿದ. ಅಲ್ಲಿಯೇ ಈತನ ಸಮಾಧಿಯಿದೆ. ಪ್ರತಿವರ್ಷ ವೈಶಾಖ ಬಹುಳ ದ್ವಾದಶಿಯಂದು ಈ ಸಂತನ ಪುಣ್ಯತಿಥಿಯನ್ನು ಅಲ್ಲಿನ ದೇವಸ್ಥಾನದ ಖರ್ಚಿನಲ್ಲೇ ಮಾಡಲಾಗುತ್ತದೆ.  ಅಂದು ಅಲ್ಲಿ ಒಂದು ಜಾತ್ರೆಯು ಸೇರುತ್ತದೆ. 

	ಪ್ರಾಸಾದಿಕ ಕವಿಯಾಗಿದ್ದ ಈತ ಶಿವಗೀತೆಯ ಮೇಲೆ ಒಂದು ಟೀಕೆಯನ್ನು ಬರೆದಿದ್ದಾನೆ. ಅನೇಕ ಶಿವಸ್ತುತಿಗಳನ್ನು ಬರೆದಿದ್ದಾನೆ. ಶ್ರೀಮಂಗೇಶನ ಶಿಬಿಕೋತ್ಸವ (ಪಲ್ಲಕಿ ಸೇವೆ) ಸಮಯದಲ್ಲಿ ಈತನಿಂದ ರಚಿತವಾದ ಝಲವೆಗಳನ್ನು ಹೇಳುತ್ತಾರೆ.
(ಎಸ್.ಎಸ್.ಜೆಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ